ಪಾಂಪಸ್
ದಕ್ಷಿಣ ಅಮೆರಿಕದ ಅರ್ಜೆಂಟೀನಕ್ಕೆ ಅಡ್ಡಲಾಗಿ ಅದರ ಮಧ್ಯದಲ್ಲಿ ಅಟ್ಲಾಂಟಿಕ್ ತೀರದಿಂದ ಪಶ್ಚಿಮಾಭಿಮುಖವಾಗಿ ಆಂಡಿಯನ್ ಆಡಿಗುಡ್ಡಗಳವರೆಗೆ ಹಬ್ಬಿರುವ ದೊಡ್ಡ ಬಯಲು. ಪಾಂಪಸ್ ಎಂಬುದು ಬಹುವಚನ. ಇದರ ಏಕವಚನ ರೂಪ ಪಾಂಪ. ಸಮತಳ ಪ್ರದೇಶ ಎಂಬ ಅರ್ಥವುಳ್ಳ ಕ್ವೆಚುವ ಇಂಡಿಯನ್ ಪದದಿಂದ ಈ ಹೆಸರು ಬಂದಿದೆ. ಇದರ ಉತ್ತರಕ್ಕೆ ಗ್ರಾನ್ ಚಾಕೊ ಮತ್ತು ದಕ್ಷಿಣಕ್ಕೆ ಪ್ಯಾಟಗೋನಿಯ ಇವೆ. ಈ ಪ್ರದೇಶ ವಾಯವ್ಯದಿಂದ ಅಗ್ನೇಯದ ಕಡೆಗೆ ಇಳಿಜಾರಾಗಿದೆ. ಮೆಂಡೋಜûದಲ್ಲಿ ಇದರ ಎತ್ತರ ಸಮುದ್ರಮಟ್ಟದಿಂದ 500 ಮೀ. ಬ್ವೇನಸ್ ಏರೀಸ್‍ನಲ್ಲಿ 20 ಮೀ. ವಾಯವ್ಯ ಮತ್ತು ದಕ್ಷಿಣಭಾಗದಲ್ಲಿ ಇರುವ ಕೆಲವು ಕಡಿದಾದ ಬೆಟ್ಟಸಾಲುಗಳನ್ನು ಬಿಟ್ಟರೆ ಈ ಪ್ರದೇಶ ಸಂಪೂರ್ಣವಾಗಿ ಸಮತಲವಾಗಿದೆ. ದಕ್ಷಿಣ ಅಮೆರಿಕದ ಇತರ ಭಾಗಗಳಲ್ಲಿರುವ ಸಣ್ಣ ಬಯಲುಗಳನ್ನೂ ಪಾಂಪಸ್  ಎಂದೇ ಕರೆಯಲಾಗುತ್ತದೆ.

ಅರ್ಜೆಂಟೀನದ ಪಾಂಪಸ್ ಪ್ರದೇಶ 7,60,000 ಚ.ಕಿಮೀ ವಿಸ್ತಾರವಾಗಿದೆ. ಇದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಪಶ್ಚಿಮ ಭಾಗ ಲಾ ಪಂಪ ಪ್ರಾಂತ್ಯದ ಬಹುಭಾಗವನ್ನು ಆವರಿಸಿದೆ. ಇದರಲ್ಲಿ ಹೆಚ್ಚು ಭಾಗ ಬಂಜರು ನೆಲ. ಇದು ಚೌಳು ಪ್ರದೇಶಗಳಿಂದಲೂ ಉಪ್ಪುನೀರಿನ ತೊರೆಗಳಿಂದಲೂ ಮರಳು ಕಾಡುಗಳಿಂದಲೂ ಕೂಡಿದೆ. ಪೂರ್ವಭಾಗದ್ದು ತೇವದಿಂದ ಕೂಡಿದ ಸಮಶೀತೋಷ್ಣ ವಾಯುಗುಣ. ಇಲ್ಲಿ ನೀರಿನ ಸೌಲಭ್ಯಗಳಿವೆ. ಈ ಭಾಗ ಅರ್ಜೆಂಟೀನದ ಸಂಪತ್ತಿನ  ಮೂಲ.

ಪಶ್ಚಿಮದಿಂದ ಹರಿಯುವ ದೊಡ್ಡ ನದಿಗಳೂ ದೂಳಿನಿಂದ ಕೂಡಿದ ಬಿರುಗಾಳಿಯೂ ಹೊಡೆದುಕೊಂಡು ಬರುವ ಸಣ್ಣ ಮರಳು, ಜೇಡಿಮಣ್ಣು ಮತ್ತು ಮೆಕ್ಕಲುಮಣ್ಣಿನಿಂದ ಇಲ್ಲಿಯ ನೆಲ ಕೂಡಿದೆ. ದಕ್ಷಿಣ ದಿಕ್ಕಿನಿಂದ ಬೀಸುವ ತಣ್ಣನೆಯ ಗಾಳಿಯೂ ಉತ್ತರದ ಉಷ್ಣವಲಯ ಪ್ರದೇಶದಿಂದ ಬೀಸುವ ಬಿಸಿಗಾಳಿಯೂ ಪರಸ್ಪರ ಸಂಧಿಸಿ ಚಂಡಮಾರುತವಾಗಿ ಪರಿಣಮಿಸಿ ಬ್ವೇನಸ್ ಏರಿಸಿನ ಸುತ್ತಮುತ್ತ ಬೀಸಿ ಭಾರಿ ಮಳೆ ಸುರಿಸುವುದುಂಟು. ಈ ಚಂಡಮಾರುತವನ್ನು ಪಾಂಪರೋಸ್ ಎಂದು ಕರೆಯುತ್ತಾರೆ.
ಪಾಂಪಸ್ ಪ್ರದೇಶದ ಪ್ರಾಣಿಗಳು ನರಿ, ಸ್ಕಂಕ್, ಗ್ವಾನಾಕೋ, ವಿeóïಕಾಚ, ಪೊದೆ ನಾಯಿ ಮುಂತಾದವು. ಇಲ್ಲಿಯ ಪಕ್ಷಿಗಳು ಗುಬ್ಬಚ್ಚಿ, ಗಿಡುಗ, ನೀರುಕೋಳಿ ಮುಂತಾದುವು.

19ನೆಯ ಶತಮಾನದಿಂದೀಚೆಗೆ ಈ ಪ್ರದೇಶ ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದಿದೆ. ಇಲ್ಲಿ ರೈಲುಮಾರ್ಗಗಳ ನಿರ್ಮಾಣವಾಗಿದೆ. ಇದರ ಆಗ್ನೇಯ ಭಾಗದಲ್ಲಿ ಪಶುಪಾಲನೆ ಮುಖ್ಯ ಉದ್ಯೋಗ. ಪಶ್ಚಿಮ ಭಾಗದಲ್ಲಿ ಮೇವಿಗಾಗಿ, ಆಲ್ಫಾಲ್ಫವನ್ನೂ ಗೋದಿಯನ್ನೂ ಬೆಳೆಯುತ್ತಾರೆ. ರೊಸಾರಿಯೋದ ಸುತ್ತಮುತ್ತ ಮೆಕ್ಕೆಜೋಳ ಮತ್ತು ಫಾಕ್ಸ್ (ಒಂದು ತೆರನ ಅಗಸೆ) ಬೆಳೆಯುತ್ತಾರೆ; ಕುರಿ ಮತ್ತು ದನಕರುಗಳನ್ನು ಸಾಕುತ್ತಾರೆ. ಬ್ವೇನಸ್ ಏರಿಸ್ ಸಮೀಪದಲ್ಲಿ ತರಕಾರಿ ಹಣ್ಣು ಮತ್ತು ಹಾಲನ್ನು ಉತ್ಪಾದಿಸಲಾಗುತ್ತದೆ. ಇವು ಆ ನಗರಕ್ಕೆ ಸರಬರಾಜಾಗುತ್ತವೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ